ಗೋಡಂಬಿ-
	ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ (ಕ್ಯಾಷ್ಯೂ). ಗೇರು, ಕಾಜು, ಮಂದಿರಿಪಪ್ಪು ಪರ್ಯಾಯನಾಮಗಳು, ಅನಕಾರ್ಡಿಯಮ್ ಆಕ್ಸಿಡೆಂಟೇಲ್ ಇದರ ವೈಜ್ಞಾನಿಕ ಹೆಸರು. ಗೋಡಂಬಿಯ ತವರು ದಕ್ಷಿಣ ಅಮೆರಿಕ ಮತ್ತು ವೆಸ್ಟ್ ಇಂಡೀಸ್, 16ನೆಯ ಶತಮಾನದಲ್ಲಿ ಪೋರ್ಚುಗೀಸರು ಬ್ರಜಿûಲಿನಿಂದ ಗೋಡಂಬಿಯನ್ನು ಭಾರತಕ್ಕೂ ಆಫ್ರಿಕಕ್ಕೂ ತಂದರು. ಭಾರತದಲ್ಲಿ ಮೊಟ್ಟಮೊದಲು ಗೋವೆಯ ಕಡಲತೀರಗಳಲ್ಲಿ ಇದರ ಬೆಳೆ ಆರಂಭವಾಯಿತು. ಕಾಲಕ್ರಮೇಣ ಭಾರತದ ಸಮುದ್ರ ತೀರಪ್ರದೇಶಗಳಲ್ಲೆಲ್ಲ ಹರಡಿದ ಇದು ಮಲಯ ಮುಂತಾದ ದೇಶಗಳಿಗೂ ಕಾಲಿಟ್ಟಿತು. ಭಾರತದಲ್ಲಿ ಮಹಾರಾಷ್ಟ್ರ., ಕೇರಳ, ಕರ್ನಾಟಕ, ಗೋವ, ತಮಿಳುನಾಡು, ಆಂಧ್ರರಾಜ್ಯಗಳಲ್ಲಿ ಅಧಿಕ ಪ್ರಮಾಣಗಳಲ್ಲೂ ಒರಿಸ್ಸ ಮತ್ತು ಬಂಗಾಳಗಳಲ್ಲಿ ಸ್ವಲ್ಪ ಪ್ರಮಾಣದಲ್ಲೂ ಗೋಡಂಬಿಯ ಬೇಸಾಯ ಇದೆ. ಗೋಡಂಬಿ ಬೆಳೆಗೆ ಹೆಸರಾಗಿರುವ ಇನ್ನಿತರ ದೇಶಗಳು ಪೂರ್ವ ಆಫ್ರಿಕ, ಬ್ರಜಿûಲ್ ಮತ್ತು ಪೋರ್ಚುಗಲ್. 

	ಗೋಡಂಬಿ ಮರ ಮಧ್ಯಮ ಗಾತ್ರದ್ದು : 5-10 ಮೀ. ಎತ್ತರಕ್ಕೆ ಬೆಳೆಯುತ್ತದೆ. ಅನೇಕ ಕವಲುಗಳಿಂದ ಕೂಡಿ ಹರಡಿಕೊಂಡು ಚೆಲುವಾಗಿ ಕಾಣುತ್ತದೆ. ಎಲೆಗಳು, ಸರಳ, ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಉದ್ದ 6-20 ಸೆ. ಮೀ., ಅಗಲ 4-15; ತುದಿ ಗುಂಡಾಗಿರುತ್ತದೆ. ಕೆಲವೊಮ್ಮೆ ತುದಿಯಲ್ಲಿ ಕಚ್ಚು ಇರಬಹುದು; ಎಲೆಯ ಬುಡ ಕ್ರಮೇಣ ಕಿರಿದಾಗುತ್ತ ಬಂದು ತೊಟ್ಟಿನೊಡನೆ ಸೇರುತ್ತದೆ. ಎಲೆಯ ಆಕಾರ ದೀರ್ಘ ಅಂಡದಂತೆ. ಮೇಲ್ಮೈ ರೋಮರಹಿತವೂ ತುಸು ಹೊಳಪುಳ್ಳದ್ದೂ ಆಗಿ ಚರ್ಮಿಲವಾಗಿರುತ್ತದೆ. ಎಲೆಯ ನಾಳವಿನ್ಯಾಸ ಪ್ರಮುಖವಾಗಿ ಕಾಣುವಂತಿದೆ. ಹೂಗಳು ಕೆಂಪು ಮತ್ತು ಪರಿಮಳಯುಕ್ತ; ಏಕಲಿಂಗಿ ಇಲ್ಲವೆ ದ್ವಿಲಿಂಗಗಳು. ಅವು ಪ್ಯಾನಿಕಲ್ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಎರಡು ಬಗೆಯ ಹೂಗಳೂ ಒಂದೇ ಗೊಂಚಲಿನಲ್ಲರುತ್ತವೆ. ಪ್ರತಿ ಹೂವಿನಲ್ಲಿ ಹಸಿರು ಬಣ್ಣದ 5 ಪುಷ್ಪಪತ್ರಗಳು, 5 ದಳಗಳು, 10 ಕೇಸರುಗಳು, ಏಕಕಾರ್ಪೆಲಿನ ಉಚ್ಚ ಸ್ಥಾನದ ಅಂಡಾಶಯ (ಗಂಡು ಹೂ ಬಿಟ್ಟು) ಇವೆ. ಫಲ ನಟ್ ಮಾದರಿಯದು. ಮೂತ್ರಪಿಂಡದಾಕಾರದ ಇದು ಸುಮಾರು 3 ಸೆಂ.ಮೀ. ಉದ್ದವೂ 2.5 ಸೆಂ.ಮೀ. ಅಗಲವೂ ಇದೆ. ಇದರ ಬಣ್ಣ ಬೂದುಮಿಶ್ರಿತ ಕಂದು. ಇದರಲ್ಲಿ ಗಡುಸಾದ ಹೊರಾವಣ ಮತ್ತು ಎರಡು ಬೀಜದಳಗಳು ಇವೆ. ರೂಢಿಯಲ್ಲಿ ಬೀಜ ಎಂದು ಕರೆಯುವುದು ಫಲವನ್ನೆ. ಯಾವುದನ್ನು ಗೇರು ಹಣ್ಣು ಎಂದು ಕರೆಯಲಾಗುತ್ತದೊ ಅದು ವಾಸ್ತವವಾಗಿ ಹಣ್ಣಲ್ಲ. ಬದಲಿಗೆ ಹೂವಿನ ತೊಟ್ಟು. ಪುಷ್ಪಪೀಠ ಮತ್ತು ಅಂಡಾಶಯವನ್ನು ಸುತ್ತುವರಿದಿರುವ ತಟ್ಟೆಯಂಥ ಭಾಗಗಳಿಂದ ಕೂಡಿದ ರಚನೆ. ಇದರ ಆಕಾರ ಪಿಯರ್ ಹಣ್ಣಿನಂತೆ, ಬಣ್ಣ ಕೆಂಪು ಇಲ್ಲವೆ ಹಳದಿ. ಇದಕ್ಕೆ ತೆಳುಸಿಪ್ಪೆಯೂ ಮಧುರವಾದ ರುಚಿಯೂ ಒಂದು ವಿಶಿಷ್ಟ ಬಗೆಯ ಕಟುವಾಸನೆಯೂ ಇವೆ.

	ಗೋಡಂಬಿ ಬೆಳೆಯ ಬೇಸಾಯ : ಕರ್ನಾಟಕದ ಹವಾಗುಣ ಗೇರಿನ ಬೇಸಾಯಕ್ಕೆ ಹಿತಕರವಾಗಿದ್ದು ಎಲ್ಲ ಜಿಲ್ಲೆಗಳಲ್ಲೂ ಇದರ ಬೇಸಾಯ ಮಾಡಬಹುದು. ಗೋಡಂಬಿ ಒರಟು ಬೆಳೆಯಾದ್ದರಿಂದ ಮಳೆ ಅಧಿಕವಾಗಿ ಹಾಗೂ ಬಹಳ ಕಡಿಮೆ ಬೀಳುವ ಪ್ರದೇಶಗಳಲ್ಲಿ ಬೆಳೆಯಬಹುದು. ಆದರೆ ಹೆಚ್ಚು ಮಳೆ ಬೀಳುವ ಬೆಟ್ಟದ ಇಳಿಜಾರುಗಳಲ್ಲಿ ಯಶಸ್ವಿಯಾಗಿದೆ. ಬೇಸಾಯ ಸಮುದ್ರ ಮಟ್ಟದಿಂದ ಹಿಡಿದು ಸುಮಾರು 800 ಮೀ. ಎತ್ತರದ ವರೆವಿಗೆ ವ್ಯಾಪಿಸಿದೆ. ಗೋಡಂಬಿಯನ್ನು ಎಂಥ ಮಣ್ಣಿನಲ್ಲಾದರೂ ಬೇಸಾಯ ಮಾಡಬಹುದು. ಸಮುದ್ರ ತೀರಗಳ ಮರಳುಭೂಮಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಆದರೂ ಜಂಬಿಟ್ಟಿಗೆ ಮಣ್ಣು (ಲ್ಯಾಟರೈಟ್) ಮತ್ತು ಕೆಂಪು ಜೇಡಿಮಣ್ಣು ಉತ್ತಮವಾದವು. P್ಷÁರೀಯ ಹಾಗೂ ಆಮ್ಲೀಯ ಭೂಮಿಗಳಲ್ಲೂ ಗೋಡಂಬಿಯನ್ನು ಬೆಳೆಸಬಹುದು. ಇದರ ವೃದ್ಧಿ ಬೀಜ (ಲಿಂಗರೀತಿ) ಮತ್ತು ಲೇಯರುಗಳಿಂದ (ನಿರ್ಲಿಂಗರೀತಿ) ಸಾಧ್ಯ. ಗೋಡಂಬಿಯಲ್ಲಿ ಅನ್ಯ ಪರಾಗಸ್ಪರ್ಶದಿಂದ ನಿಷೇಚನವಾಗುವುದರಿಂದ ಅಧಿಕ ಇಳುವರಿ ಕೊಡುವ ಒಂದು ಮರÀ ತನ್ನ ಈ ಲಕ್ಷಣವನ್ನು ಉಳಿಸಿಕೊಂಡು ಹೋಗುವ ಸಾಧ್ಯತೆ ಕಡಿಮೆ. ಆದ್ದರಿಂದ ಲೇಯರುಗಳಿಂದ ವೃದ್ಧಿ ಮಾಡುವುದೇ ಉತ್ತಮವೆಂದು ಬಗೆಯಲಾಗಿದೆ. 

	ಬೀಜಗಳಿಂದ ವೃದ್ಧಿ: ಹೆಚ್ಚಿನ ಇಳುವರಿ ಕೊಡುವ ಹಾಗೂ ರುಚಿ ಮತ್ತು ಆಕರ್ಷಕವಾದ ಹಣ್ಣುಗಳನ್ನು ಬಿಡುವ ಗೋಡಂಬಿ ಮರದಿಂದ ಬೀಜಗಳನ್ನು ಆರಿಸಿ, ಒಣಗಿಸಿ, ಎತ್ತರದ ಪಾತಿಗಳಲ್ಲಿ ಬೀಜಗಳ ನಡುವೆ 9" ಅಂತರವಿರುವಂತೆ ನೆಡಬೇಕು. ಸಾಲುಗಳ ನಡುವಣ ಅಂತರವೂ 9" ಇರಬೇಕು. ನೇರವಾಗಿ ಭೂಮಿಯಲ್ಲೇ ಅಲ್ಲದೆ ಪಾಲಿತೀನ್ ಚೀಲ ಅಥವಾ ಕುಂಡಗಳಲ್ಲಿ ಕೂಡ ಬೀಜಗಳನ್ನು ನೆಡಬಹುದು. ದೂರ ಸ್ಥಳಗಳಿಗೆ ಸುಲಭವಾಗಿ ಸಾಗಿಸಲು ಸಾಧ್ಯವಾಗುವುದರಿಂದ ಪಾಲಿತೀನ್ ಚೀಲದಲ್ಲಿ ಸಸಿಗಳನ್ನು ಬೆಳೆಸುವುದು ಒಳ್ಳೆಯದು. ಬೀಜಗಳಿಗೆ ಕಾಲಕ್ಕೆ ಸರಿಯಾಗಿ ನೀರು ಹಾಕಿದಲ್ಲಿ ಸುಮಾರು 20 ದಿವಸಗಳ ಅನಂತರ ಮೊಳೆಯುತ್ತವೆ. ಸಸಿಗಳು ಎರಡು ತಿಂಗಳು ದೊಡ್ಡವಾದ ಮೇಲೆ ಭೂಮಿಯಲ್ಲಿ ನೆಡಲು ಯೋಗ್ಯವಾಗಿರುತ್ತವೆ. 

	ಲೇಯರಿಂಗ್ : ಈ ಕ್ರಮಕ್ಕೆ ಒಂದು ವರ್ಷ ವಯಸ್ಸಿನ ಮರದ ರೆಂಬೆ ಸೂಕ್ತವಾದ್ದು. ಈ ವಯಸ್ಸಿನ ರೆಂಬೆಯ ಬೆಳವಣಿಗೆ ಚುರುಕಾಗಿರುತ್ತದೆ. ಆರಿಸಿದ ರೆಂಬೆಯ ಒಂದು ಭಾಗದಲ್ಲಿ 1" ದಷ್ಟು ಮೇಲಿನ ತೊಗಟೆಯನ್ನು ತೆಗೆದು ಹಾಕಿ, ತೆಂಗಿನ ಗುಂಜು ಅಥವಾ ಸುತಲಿದಾರದಿಂದ ಸುತ್ತಬೇಕು. ಅನಂತರ ನಯವಾದ ಮಣ್ಣನ್ನು ಹಾಕಿ ಪ್ಲಾಸ್ಟಿಕ್ ಹಾಳೆಯಿಂದ ಕಟ್ಟಿ ನೀರಿನಿಂದ ಚೆನ್ನಾಗಿ ನೆನೆಸಬೇಕು. ಸುಮಾರು 40-45 ದಿವಸಗಳ ಬಳಿಕ ನೇರಳೆಬಣ್ಣದ ಬೇರುಗಳು ಹೊರಮೂಡುತ್ತವೆ. ಆಗ ಲೇಯರನ್ನು ತಾಯಿಮರದಿಂದ ಬೇರ್ಪಡಿಸಬೇಕು. ಲೇಯರ್ ಗಂಟಿನ ಕೆಳಗೆ ಗಿ —ಆಕಾರದ ಕಚ್ಚು ಮಾಡಿ ಕೊಂಬೆಯ 1/3 ಭಾಗವನ್ನು ಕತ್ತರಿಸಬೇಕು. ಒಂದು ವಾರ ಬಿಟ್ಟು ಕೊಂಬೆಯ ಕಚ್ಚನ್ನು ಇನ್ನೂ ಆಳ ಮಾಡಬೇಕು. 5 ದಿವಸಗಳ ತರುವಾಯ ತಾಯಿ ಮರದಿಂದ ಸಂಪೂರ್ಣವಾಗಿ ಬೇರ್ಷಡಿಸಬೇಕು. ಲೇಯರ್ ಮಾಡಲು ಅಕ್ಟೋಬರ್-ಏಪ್ರಿಲ್ ತಿಂಗಳ ನಡುವಣ ಕಾಲ ಸೂಕ್ತವಾದ್ದು. 

	ಕಸಿ ಕಟ್ಟುವಿಕೆ : ಕಡಿಮೆ ದರ್ಜೆಯ ಗೋಡಂಬಿಯ ಬೊಡ್ಡೆಗೆ ಉತ್ತಮ ಗುಣವುಳ್ಳ ಮರದ ರೆಂಬೆಯನ್ನು ಕಸಿ ಮಾಡಿ ಮರವಾಗಿ ಬೆಳೆಸುವುದರಿಂದ ಉತ್ತಮ ಇಳುವರಿ ಸಿಕ್ಕುವಂತೆ ಮಾಡಬಹುದು. 

	ಗೋಡಂಬಿ ಸಸಿಗಳನ್ನು ಸಾಮಾನ್ಯವಾಗಿ ಮುಂಗಾರು ಮಳೆಯ ಕಾಲದಲ್ಲಿ ನೆಡುತ್ತಾರೆ. ನೆಡುವುದಕ್ಕೆ ಮುಂಚೆ ಸುಮಾರು ಒಂದು ತಿಂಗಳು ಮುಂಚೆ, ಗುಂಡಿಯಿಂದ ಗುಂಡಿಗೆ 8-10 ಮೀ. ಅಂತರವಿರುವಂತೆ. 1 ಘನಮೀಟರ್ ಅಳತೆಯ ಗುಂಡಿಗಳನ್ನು ತೆಗೆಯಬೇಕು ಸಸಿಗಳನ್ನು ನೆಡುವುದಕ್ಕಿಂತ ಮುಂಚೆ
	ಗುಂಡಿಗಳನ್ನು ಬೂದಿ ಅಥವಾ ಸುಟ್ಟ ಮಣ್ಣು ಮತ್ತು ಮಣ್ಣುಗಳ ಮಿಶ್ರಣದಿಂದ ತುಂಬಬೇಕು. ಸಸಿಗಳು ಎಳೆಯವಾಗಿರುವಾಗ ಮಾತ್ರ ನೀರು ಹಾಯಿಸುವುದು ಅಗತ್ಯ. ಆಗಿಂದಾಗ್ಗೆ ಕೃತಕಗೊಬ್ಬರ, ಹಸಿರಲೆ ಗೊಬ್ಬರ ಮುಂತಾದವನ್ನು ಹಾಕುತ್ತಿದ್ದರೆ ಬೆಳೆ ಹುಲುಸಾಗಿ ಬರುತ್ತದೆ. 

	ಮಧ್ಯವರ್ತಿ ಬೇಸಾಯ : ಗೋಡಂಬಿ ಮರಗಳ ಮಧ್ಯೆ ವರ್ಷಕ್ಕೆ ಒಂದು ಬಾರಿ ಉಳುಮೆ ಮಾಡುವುದು, ಮರಗಳ ಸುತ್ತಲೂ ನೆಲವನ್ನು ಅಗೆಯುವುದು ರೋಗ, ಕೀಟ ಅಥವಾ ಬೇರೆ ಕಾರಣಗಳಿಂದ ಒಣಗಿ ಹೋಗಿರುವ ಭಾಗಗಳನ್ನು ತೆಗೆಯುವುದು ಮುಂತಾದವು ಮಧ್ಯವರ್ತಿ ಬೇಸಾಯದ ಕೆಲವು ಕ್ರಮಗಳು. ಗೋಡಂಬಿ ತೋಟಗಳಲ್ಲಿ ಬೇರೆ ಜಾತಿಯ ಬೆಳೆಗಳನ್ನು ಕೃಷಿ ಮಾಡಬಹುದು. ಆದರೆ ಮಿಶ್ರ ಬೆಳೆಗೆ ಮೊದಲು 3-4 ವರ್ಷಗಳು ಮಾತ್ರ ಸಾಧ್ಯತೆ ಉಂಟು. ರೂಢಿಯಲ್ಲಿರುವ ಮಿಶ್ರಬೆಳೆಗಳೆಂದರೆ ಮೆಣಸಿಕಾಯಿ, ಶುಂಟಿ, ಗೆಣಸು, ಆಲೂಗಡ್ಡೆ, ರಾಗಿ ಮತ್ತು ಕಡಲೆ, ಗೋಡಂಬಿ ಮರಗಳನ್ನು ಸವರುವುದು ಕೆಲವು ಕಡೆ ವಾಡಿಕೆಯಲ್ಲಿದೆಯಾದರೂ ಇಳುವರಿ ಕಡಿಮೆಯಾಗುತ್ತದೆಯಾಗಿ ಗೋಡಂಬಿ ಮರವನ್ನು ಸವರುವುದು ಒಳ್ಳೆಯದಲ್ಲ. 

	ಗೋಡಂಬಿ ಮರ ನೆಟ್ಟ ನಾಲ್ಕು ವರ್ಷಗಳ ಅನಂತರ ಫಲ ಕೊಡಲು ಪ್ರಾರಂಭಿಸುತ್ತದೆ. ಮರದ ಸರಾಸರಿ ಆಯಸ್ಸು ಸುಮಾರು 40 ವರ್ಷ, ನವಂಬರಿನಿಂದ ಫೆಬ್ರವರಿವರೆಗೆ 2-3 ಹಂತಗಳಲ್ಲಿ ಹೂ ಬಿಡುತ್ತದೆ. ಹೂಬಿಟ್ಟ ಎರಡು ತಿಂಗಳಿಗೆ ಹಣ್ಣು ಕುಯ್ಲಿಗೆ ಬರುತ್ತವೆ. ಸಾಮಾನ್ಯವಾಗಿ ಗೋಡಂಬಿ ವರ್ಷಕ್ಕೆ ಒಂದು ಸಲ ಫಲ ಕೊಡುತ್ತದೆ. ಅಪರೂಪವಾಗಿ ಎರಡು ಸಲ ಫಲ ಕೊಡುವುದುಂಟು. 2-3 ಹಂತಗಳಲ್ಲಿ ಗೋಡಂಬಿಹೂಗಳು ಅರಳುವುದರಿಂದ ಹಣ್ಣುಗಳು 2-3 ಹಂತಗಳಲ್ಲಿ ಮಾಗುತ್ತವೆ. ಆದ್ದರಿಂದ ಕುಯ್ಲಿನ ಕಾಲ ಸುಮಾರು 45 ರಿಂದ 70 ದಿವಸಗಳ ವರೆಗೆ ಹೋಗಬಹುದು. ಹಣ್ಣು ಚೆನ್ನಾಗಿ ಮಾಗಿದ ಮೇಲೆ ಕೊಯ್ಯಬೇಕು. ಮರದಿಂದ ಮರಕ್ಕೆ, ತೋಟದಿಂದ ತೋಟಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಇಳುವರಿಯ ಪರಿಮಾಣದಲ್ಲಿ ವ್ಯತ್ಯಾಸವುಂಟು. ಇಳುವರಿಯ ಪರಿಮಾಣ 10 ವರ್ಷ ವಯಸ್ಸಿನ ಮರಗಳಲ್ಲಿ ಅಧಿಕ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಗೋವ ಮುಂತಾದ ಕರಾವಳಿ ಪ್ರದೇಶಗಳಲ್ಲಿ ಒಂದೊಂದು ಮರದಿಂದ 10-15 ಕೆ.ಜಿ. ಯಷ್ಟು ಬೀಜಗಳು ಸಿಕ್ಕುತ್ತವೆ. ಉತ್ತರ ಭಾರತದಲ್ಲಿನ ಸರಾಸರಿ ಇಳುವರಿ ದಕ್ಷಿಣ ಭಾಗಕ್ಕಿಂತ ಹೆಚ್ಚು. ಚೆನ್ನಾಗಿ ಬೇಸಾಯ ಮಾಡಿದ ತೋಟಗಳಲ್ಲಿ ಮರಕ್ಕೆ 60 ಕೆ.ಜಿ.ಯಷ್ಟು ಬೀಜ ಪಡೆಯಬಹುದು. 

	ಗೋಡಂಬಿ ಮರಕ್ಕೆ ಭಿನ್ನಕೀಟಗಳಿಂದ ಬಾಧೆ ಉಂಟು. ಅಲ್ಲದೆ ಈ ಮರಕ್ಕೇ ಹತ್ತುವ ರೋಗಗಳೂ ಇವೆ. 	ಕೀಟಗಳು : 1 ಕಾಂಡ ಕೊರೆಯುವ ಹುಳು : ಇದು ಕಾಂಡವನ್ನು ಕೊರೆದು ರಂಧ್ರ ಮಾಡಿಕೊಂಡು ವಾಸಿಸುತ್ತದೆ. ರಂಧ್ರ ಕೊರೆದ ಭಾಗದಿಂದ ಮೇಲಿನ ಗಿಡದ ಭಾಗ ಒಣಗಿ ಹೋಗುತ್ತದೆ. ಕ್ರಿಯೊಸೋಟ್ ಎಣ್ಣೆಯಲ್ಲಿ ನೆನೆಸಿದ ಹತ್ತಿಯಿಂದ ಹುಳು ಕೊರೆದ ರಂಧ್ರವನ್ನು ಮುಚ್ಚಿ ಒಣಗಿರುವ ಕಾಂಡದ ಭಾಗವನ್ನು ಕತ್ತರಿಸಿ ಸುಡುವುದರಿಂದ ಈ ಹುಳುವನ್ನು ಹತೋಟಿಯಲ್ಲಿಡಬಹುದು. 2 ಎಲೆ ತಿನ್ನುವ ಕಂಬಳಿ ಹುಳು : ಇದು ಎಲೆ ಮತ್ತು ಹೂವುಗಳನ್ನು ತಿಂದು ನಾಶಪಡಿಸುತ್ತದೆ. 50% ಗ್ಯಾಮಕ್ಸೇನ್ ದ್ರಾವಣವನ್ನು ಸಿಂಪಡಿಸುವುದರಿಂದ ಇದನ್ನು ನಿಮೂಲ ಮಾಡಬಹುದು. 3 ಥ್ರಿಪ್ಸ್ : ಇವು ಎಳೆಯ ಕಾಂಡ, ಎಲೆ ಮತ್ತು ಹೂಗೊಂಚಲಿನಲ್ಲಿ ಇದ್ದು ರಸವನ್ನು ಹೀರಿ ಗಿಡ ಒಣಗುವಂತೆ ಮಾಡುತ್ತವೆ. 0.05 ಬಿ. ಎಚ್. ಸಿ. ಅಥವಾ ಫಾಲಿಡಾಲ್ ಪುಡಿಯನ್ನು ಸಿಂಪಡಿಸಿ ಇವನ್ನು ನಿಯಂತ್ರಿಸಬಹುದು. 

	ರೋಗಗಳು : ಮುಖ್ಯವಾದದ್ದು ಡೈಬ್ಯಾಕ್ ಎಂಬ ರೋಗ. ಗೋಡಂಬಿ ಬೆಳೆಗೆ ಬಹಳ ನಷ್ಟವನ್ನುಂಟುಮಾಡುವ ಪ್ರಬಲ ರೋಗವಿದು. ಇದರಿಂದ ನರಳುವ ಮರಗಳನ್ನು ಕಡಿದು ಸುಡುವುದು ಲೇಸು. ಬೋರ್ಡೋ ದ್ರಾವಣವನ್ನು ಸಿಂಪಡಿಸಿ ಈ ರೋಗವನ್ನು ತಡೆಗಟ್ಟಬಹುದು. 
	ಗೋಡಂಬಿಯ ಉಪಯೋಗಗಳು : ಬೀಜವನ್ನು ಹಣ್ಣಿನಿಂದ ಬೇರ್ಪಡಿಸಿದ ಮೇಲೆ ಸೊನೆಹೋಗುವಂತೆ ಚೆನ್ನಾಗಿ ಒಣಗಿಸಿ, ಮೇಲಿನ ಸಿಪ್ಪೆಯನ್ನು ತೆಗೆದು ಹಾಕಿ ಬಳಸುತ್ತಾರೆ. ಗೋಡಂಬಿ ಬೀಜವನ್ನು ಒಂದು ಪೌಂಡು ತೂಕದಲ್ಲಿ ಇರುವ ಬೀಜದ ಸಂಖ್ಯೆಯ ಆಧಾರದ ಮೇಲೆ ಹಲವು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಪೌಂಡಿಗೆ 210,240,280,320,400 ಮತ್ತು 450-ಹೀಗೆ ಬೀಜಗಳ ಸಂಖ್ಯೆ ವ್ಯತ್ಯಾಸವಾಗುತ್ತದೆ. ಪೌಂಡಿಗೆ ಹೆಚ್ಚು ಬರುವ ಬೀಜಗಳಿಗೆ ಕಡಿಮೆ ಬೆಲೆಯೂ ಕಡಿಮೆ ಬರುವ ಬೀಜಗಳಿಗೆ ಹೆಚ್ಚು ಬೆಲೆಯೂ ಸಿಕ್ಕುತ್ತದೆ. ಅಂದರೆ ತೂಕವಾರು ಬೆಲೆ ನಿಷ್ಕರ್ಷೆ ಆಗುತ್ತದೆ. ಬೀಜವನ್ನು ಹಸಿಯಾಗಿ ಹಾಗೂ ಹುರಿದು ಬಳಸುವ ಪದ್ಧತಿ ಇದೆ. ಎಳೆಯ ಬೀಜವನ್ನು ಹಸಿಯಾಗಿರುವಾಗಲೇ ಪಲ್ಯ ಮಾಡಿ ತಿನ್ನುವುದುಂಟು. ಗೋಡಂಬಿ ಬೀಜ ಮಧುರವಾದ ವಾಸನೆ ಮತ್ತು ಹಿತಕರ ರುಚಿಯುಳ್ಳ ಪುಷ್ಟಿಕರವಾದ ಆಹಾರ. ಆದರೆ ಅತಿಯಾದ ಸೇವನೆಯಿಂದ ಪಿತ್ತವಿಕಾರಗಳು ಆಗುವುದುಂಟು. ಮಿಠಾಯಿ, ಬಿಸ್ಕತ್ತು ಮತ್ತು ಸಿಹಿತಿಂಡಿಗಳಲ್ಲಿ ಗೋಡಂಬಿಯ ಬಳಕೆ ಇದೆ. ಬೀಜವನ್ನು ಹುರಿದು ಅಥವಾ ಎಣ್ಣೆಯಲ್ಲಿ ಕರಿದು ಉಪ್ಪನ್ನೋ ಕಾರವನ್ನೋ ಸೇರಿಸಿ ತಿನ್ನುವುದುಂಟು. ಬೀಜದ ಸಿಪ್ಪೆಯಿಂದ ಒಂದು ಬಗೆಯ ಎಣ್ಣೆಯನ್ನು ತೆಗೆಯಲಾಗುತ್ತದೆ. ಇದು ಒಳ್ಳೆ ವಾಣಿಜ್ಯವಸ್ತು. ಇದಕ್ಕೆ ಜಲ ನಿರೋಧಕ ಸಾಮಥ್ರ್ಯ ಇರುವುದರಿಂದ ಇದನ್ನು ಮೀನಿನ ಬಲೆ ದೋಣಿ ಮತ್ತು ನೀರಿನಲ್ಲೆ ಇಡಬೇಕಾದಂಥ ಇತರ ಮರದ ವಸ್ತುಗಳಿಗೆ ಲೇಪಿಸಲು ಬಳಸುತ್ತಾರೆ. ಆಮ್ಲೀಯ ಮತ್ತು ಕ್ಷಾರೀಯ ವಸ್ತುಗಳು ಇದರ ಮೇಲೆ ವರ್ತಿಸುವುದಿಲ್ಲವಾದ್ದರಿಂದ ಗೋಡಂಬಿ ಎಣ್ಣೆಯನ್ನು ಬಣ್ಣ, ಮೆರುಗಣ್ಣೆ, ಮುಂತಾದವುಗಳ ತಯಾರಿಯಲ್ಲಿ ಬಳಸಲಾಗುತ್ತದೆ. ಸೀಮಾಂತರ ಮಾರುಕಟ್ಟೆಗಳಲ್ಲಿ ಎಣ್ಣೆಗೆ ಉತ್ತಮ ಬೆಲೆಯಿದ್ದು ಭಾರತಕ್ಕೆ ವಿದೇಶಿ ವಿನಿಮಯವನ್ನು ಸಂಪಾದಿಸುವ ವಸ್ತುವಾಗಿದೆ. ಮಾಗಿದ ಗೋಡಂಬಿ ಹಣ್ಣನ್ನು ಹಿಂಡಿ ಪಡೆಯಲಾಗುವ ರಸದಿಂದ ಪಾನಕ ಮುಂತಾದವನ್ನು ಮಾಡಬಹುದು. ಅಲ್ಲೆ ರಸವನ್ನು ಹುದುಗುವಿಕೆಗೆ ಒಳಪಡಿಸಿ ಹೆಂಡ, ಸಾರಾಯಿ ಮುಂತಾದವನ್ನು ಮಾಡುವ ಕ್ರಮ ದಕ್ಷಿಣ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿದೆ. ಚೆನ್ನಾಗಿ ಮಾಗಿದ ಹಣ್ಣಿನ ರಸಕ್ಕೆ ಅದರ ಅರ್ಧದಷ್ಟು ಮೊತ್ತದ ಸಕ್ಕೆರ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ, ಒಂದು ಗಂಟೆಯ ಕಾಲ ಕುದಿಸಿ, ರಸಪಾಕವನ್ನು (ಜಾಮ್) ತಯಾರಿಸಬಹುದು. ಗೋಡಂಬಿ ಮರಕ್ಕೆ ಇತರ ಉಪಯೋಗಗಳೂ ಇವೆ. ಹೂವಿನ ತೊಟ್ಟನ್ನು ಹಸಿಯಾಗಿ ಇಲ್ಲವೆ ಬೇಯಿಸಿ ತಿನ್ನುವ ರೂಢಿ ಇದೆ. ಎಳೆಯ ಎಲೆಗಳನ್ನು ಆಹಾರವಸ್ತುಗಳಿಗೆ ವಾಸನೆ ಕಟ್ಟಲು ಸ್ವಲ್ಪ ಪರಿಮಾಣದಲ್ಲಿ ಬಳಸುವುದುಂಟು. ಗೋಡಂಬಿಯ ಮೆತುಕಾಂಡ ಮತ್ತು ಎಲೆಗಳು ದನಗಳಿಗೆ ಒಳ್ಳೆಯ ಮೇವು. ಹಸಿರೆಲೆ ಉತ್ತಮ ಗೊಬ್ಬರ. ಮರವನ್ನು ಉರುವಲಾಗಿ ಬಳಸಬಹುದು. 

	ಗೋಡಂಬಿಯ ಬೇಸಾಯ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಮುದ್ರತೀರ ಪ್ರದೇಶಗಳಲ್ಲಿ ಆವರಿಸಿದೆ. ಬೆಳೆಯ ವಿಸ್ತೀರ್ಣ ಹಾಗೂ ಉತ್ಪಾದನೆಗೆ ಕೇರಳ ಮತ್ತು ಕರ್ನಾಟಕಗಳು ಅನು ಕ್ರಮಾವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆಯುತ್ತವೆ. ಈಗ ಭಾರತದಲ್ಲಿ ಸುಮಾರು 12,50,000 ಎಕರೆಗಳಷ್ಟು ಗೋಡಂಬಿಯ ಬೇಸಾಯ ಉಂಟು. ಇದರಲ್ಲಿ ಕೇವಲ ಅರ್ಧದಷ್ಟು ಮಾತ್ರ ಇಳುವರಿ ಕೊಡುವ ಸ್ಥಿತಿಯಲ್ಲಿದೆ ; ಉಳಿದ ಅರ್ಧಭಾಗ ಎಳೆಯ ತೋಟಗಳಾಗಿವೆ. ಕರ್ನಾಟಕದಲ್ಲಿನ ಒಟ್ಟು ವಿಸ್ತೀರ್ಣ ಸುಮಾರು 1,60,000 ಎಕರೆಗಳು. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿರುವ ವಿಸ್ತೀರ್ಣವನ್ನು (ಎಕರೆಗಳಲ್ಲಿ) ಕೆಳಗಿನ ಪಟ್ಟಿಯಲ್ಲಿ ಕಾಣಿಸಿದೆ.
 
			ದಕ್ಷಿಣ ಕನ್ನಡ ಜಿಲ್ಲೆ 	...	95,766
			ಉತ್ತರ ಕನ್ನಡ ಜಿಲ್ಲೆ	...	37,175
			ಶಿವಮೊಗ್ಗ		...	 5,353
			ತುಮಕೂರು		... 	 3,217
			ಬೆಂಗಳೂರು		...	 1,845
			ಕೋಲಾರ		...	 2,982 

	ರಾಷ್ಟ್ರದ ಸಂಪತ್ತನ್ನು ಹೆಚ್ಚಿಸಲು ಗೋಡಂಬಿ ಪರಿಣಾಮಕಾರಿಯಾಗಿದೆ. ವಿದೇಶಿ ವಿನಿಮಯ ಗಳಿಕೆಯ ದೃಷ್ಟಿಯಿಂದ ಗೋಡಂಬಿಗೆ ಎರಡನೆಯ ಸ್ಥಾನ. 1925ರಲ್ಲಿ ಕೇವಲ 25 ಟನ್ ಗೋಡಂಬಿಯನ್ನು ರಫ್ತು ಮಾಡಲಾಯಿತು. ಈಗ ಈ ಮೊತ್ತ 60,000ಟನ್ ಗಳಿಗೇರಿದೆ. 1964-65ರ ಸಾಲಿನಲ್ಲಿ ಗೋಡಂಬಿ ಬೀಜ ಮತ್ತು ಎಣ್ಣೆಗಳ ರಫ್ತಿನಿಂದ ಗಳಿಸಿದ ಹಣ ಅನುಕ್ರಮವಾಗಿ 29 ಮತ್ತು 2.19ಕೋಟಿ ರೂಪಾಯಿಗಳು. ಗೋಡಂಬಿಯ ಪ್ರಾಮುಖ್ಯವನ್ನು ಕಂಡುಕೊಂಡ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರ್ಕಾರಗಳು 1958ರಲ್ಲಿ ಗೋಡಂಬಿ ಅಭಿವೃದ್ಧಿ ಕಾರ್ಯಯೋಜನೆಯನ್ನು ಕೈಗೊಂಡವು. ಇದರ ಫಲವಾಗಿ 1961ರಿಂದೀಚೆಗೆ ಗೋಡಂಬಿ ಬೆಳೆಯ ವಿಸ್ತೀರ್ಣ 73,000 ಎಕರೆಗಳಷ್ಟು ಹೆಚ್ಚಾಗಿದೆ. 
(ಡಿ.ಎಂ,; ಎಂ.ಎಚ್.ಎಂ.; ಎ.ಕೆ.ಎಸ್.; ಎಸ್‍ಐ.ಎಚ್.)u

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ